Total Pageviews

Thursday, January 9, 2014

ಗಲ್ಲಿ ಕ್ರಿಕೆಟ್ - ದೇಶದ ಹಾರ್ಟ್ ಬೀಟ್

ಶನಿವಾರ ಅರ್ಧ ದಿನ ಸ್ಕೂಲು ಮುಗಿಸಿ ಮನೆಗೆ ಬಂದಿದ್ದಾಯ್ತು.ನಾನು ನಮ್ಮಣ್ಣ ಯಾವತ್ತು ಸ್ಕೂಲಿಂದ ಜೊತೆಗೆ ವಾಪಸ್ ಬಂದಿರಲಿಲ್ಲ.ದಾರಿ ಪೂರ್ತಿ ನಾನು ಹಾಡ್ ಹೇಳ್ಕೊಂಡು,ಎಲ್ಲಾರ್ ಜೊತೆ ಮಾತಾಡ್ಕೊಂಡು ನಡೀತೀನಿ ಅಂತ ರವಿಯ ಕಂಪ್ಲೇಂಟ್.ರವಿ ಅವನ ಗೆಳೆಯರ ಜೊತೆ ಏನು ಮಾತಾಡ್ತಾನೆ ಅನ್ನೋದು ನನಗೆ ಕುತೂಹಲ.ಅವ್ನು ಸುಮಾರು ಎಂಟ್ನೇ ಕ್ಲಾಸಲ್ಲಿ ಇದ್ದ.ನಾನು ಐದು.
“ರಘು..ಸುಮ್ನೆ ಸೈಕಲ್ ತಳ್ಕೊಂಡ್ ಬಾ” ಅಂತ ಗದರಿಸಿ ನನ್ನ ಕಡೆಗೆ ಅಮ್ಮ ಕೊಡಿಸಿದ ಗೇರ್ ಸೈಕಲ್ ತಳ್ಳೋನು ರವಿ.ಸ್ವಲ್ಪ ದೂರ ತಳ್ಳಿದ ಹಾಗೆ ನಾಟ್ಕ ಮಾಡಿ ನಾನು ಏನೋ ಒಂದು ನೆಪ ಹೇಳಿ ಅವ್ನಿಗೆ ವಾಪಸ್ ಕೊಟ್ಬಿಡ್ತಿದ್ದೆ.ಅಯ್ಯೋ ಅವ್ನ ಆಸ್ತಿ ಸ್ವಾಮಿ ಅದು.ನಂಗ ಕೊಡ್ಸಿದ್ದು ನಮ್ಮಮ್ಮ ಸೈಕಲ್ಲು?ಒಂದಿನ ಸ್ಕೂಲ್ಗೆ ಸೈಕಲ್ ಓಡಿಸ್ಕೊಂಡು ಹೋಗಿ ಮೈನ್-ರೋಡ್ ಅಲ್ಲಿ ಬುಟ್ಟಿ ಒಳಗೆ ತರಕಾರಿ ತುಂಬ್ಕೊಂಡ್ ಹೋಗ್ತಿದ್ದ ಆಂಟಿಗೆ ಡಿಕ್ಕಿ ಹೊಡಿದು ಬಿದ್ದಿದ್ದಕ್ಕೆ ರಾದ್ಧಾಂತ ಮಾಡಿದ್ದ ನಮ್ಮಣ್ಣ. ಮಂಡಿ ತೆರಚಿದ್ದು ನನಗೆ. ತಲೆ ತಿರುಗಿದ್ದು ಮನೆಯವ್ರಿಗೆಲ್ಲ. ಅವ್ನ ಸೈಕಲ್ ಅವ್ನೆ ತಳ್ಳಲಿ ಅಂತ ಬಿಟ್ಟು ಕೈಯಲ್ಲಿ ಕ್ಯಾರಿಯರ್ ಅಲ್ಲಾಡಿಸಿಕೊಂಡು ಆರನೇ ಕ್ಲಾಸ್ ಮೀರಾ ಜೊತೆ ಮಾತಾಡ್ಕೊಂಡು ಬರ್ತಿದ್ದೆ. ನಾನು ತುಂಬಾ ಮುದ್ದಾಗಿದಿನಿ ಅಂತ ಅನ್ನಿಸೋದಂತೆ ಮೀರಾಗೆ.
ಮನೆಗೆ ಬಂದು ಊಟ ಮಾಡಿ ಸ್ವಲ್ಪ ಹೊತ್ತು ಟೀ.ವಿಯಲ್ಲಿ WWF ನೋಡಿದೆ.ನೋಡ್ತಿದ್ದ ಹಾಗೆ ಕಣ್ಣೆಳ್ಕೊಂಡ್ ಹೋಗಿ ಇನ್ನೊಂದ್ ಲೋಕಕ್ಕೆ ಬಿಸಾಕಿತ್ತು. ಒಳ್ಳೆ ನಿದ್ದೆ.
ಕನಸಲ್ಲಿ ಯಾರೋ ಕೂಗ್ತಿರೋ ಹಾಗೆ.
“ಏಯ್ ಸರಿಯಾಗ್ ಹಾಕೊ.. ವಿಕೆಟ್ ಟು ವಿಕೆಟ್ ಬಾಲ್ ಮಾಡೋ” ಅಂತ ಚೀರೋ ಹಾಗೆ. ಎದ್ದು ಕಣ್ಣುಜ್ಜಿ ಗಡಿಯಾರ ನೋಡಿದೆ. ಟೈಮ್ ನೋಡೋದನ್ನ ಇನ್ನು ಕಲೀಬೇಕಿತ್ತು. “ಬಾಲ್ ಆ ತಮಿಳ್ ಆಂಟಿ ಮನೇಗ್ ಹೋಗಿದೆ.. ಹುಷಾರಾಗಿ ಒಳಗೆ ಹೋಗು.. ಗೊತ್ತಾಗಬಾರದು ಅವ್ರಿಗೆ” ಅಂತ ನಮ್ಮಣ್ಣ ಪಕ್ಕದ ಮನೆ ಪದ್ದಿಗೆ ಹೇಳಿದ. ನಿದ್ದೆ ಇಂದ ಎದ್ದ ಮೂಡು.ರಪ್ಪಂತ ಕೋಪ ತಲೆಗೆ ಹತ್ತಿತು.”ಆಗ್ಲೆ ಆಡೋಕೆ ಶುರು ಮಾಡಿದಾರೆ.ನನ್ನನ್ನ ಎಬ್ಬಿಸು ಇಲ್ಲ.ಬೇಕು ಅಂತ ಮಾಡ್ತಾರೆ.ನನ್ ಕಂಡ್ರೆ ಹೊಟ್ಟೆ ಉರಿ ಈ ನಮ್ಮಣ್ಣಂಗೆ” ಅಂತ ಮನ್ಸಲ್ಲೇ ಶಾಪ ಹಾಕ್ಕೊಂಡು ಹೊರಗೆ ಓಡಿ ಹೋಗಿ ಗೇಟ್ ಬಳಿ ನಿಂತೆ.
”ಲೇ ನನ್ ಮಗನೆ.. ನನ್ನ ಯಾಕೋ ಎಬ್ಬಿಸಲಿಲ್ಲ” ಅಂತ ಕೋಪದಲ್ಲಿ ಅಣ್ಣನ ಮೇಲೆ ರೇಗಿದೆ.
“ಅಂಡಿಗೆ ವಿಕೆಟ್ ತಿವಿದ್ರು ಏಳ್ದೆ ಹೋದ್ರೆ ನಾನೇನ್ ಮಾಡ್ಲಿ” ಅನ್ನುತ್ತಾ ಕಿರಣ್ ತಂದಿದ್ದ ಬ್ಯಾಟ್ ಹಿಡಿದು ನಿಂತ.
ಮೂರು ವಿಕೆಟ್ ಟಾರ್ ರೋಡಿನೊಳಗೆ ನೆಟ್ಟಿದ್ದರು.ಅದ್ರಲ್ಲಿ ಒಂದರ ಪಾಯಿಂಟು ಸೊಟ್ಟ ಆಗಿತ್ತು ಸ್ವಲ್ಪ. ಹೋದ ಸರ್ತಿ ಟಾರ್ ಹಾಕಿದಾಗ ನಮ್ಮ ಪಿಚ್ ನೋಡ್ಕೊಂಡು ಮೂರು ಹಳ್ಳ ಮಾಡ್ಕೊಂಡಿದ್ವಿ. ವಿಕೆಟ್ ನೆಡೋಕೆ.
“ಮುಂದಿನ ಮ್ಯಾಚು ನಾನು ಒಂದು ಟೀಮಿಗೆ ಆಡ್ತಿನಿ” ಅಂತ ಬೆಪ್ಪಾಗಿ ಹೇಳಿ ಗೇಟ್ ತೆಗೆದು ಮೋರಿಯ ಪಕ್ಕ ಕೂತೆ.
ಅವರು ಆಡ್ತಿದ್ದ ಮ್ಯಾಚಲ್ಲಿ ನನಗೆ ಹೆಚ್ಚು ಆಸಕ್ತಿ ಇರಲಿಲ್ಲ.ನಮ್ಮಣ್ಣ ಬ್ಯಾಟಿಂಗ್ ಮಾಡ್ತಿದ್ದ.ಬಾಲ್ ಮತ್ತೆ ತಮಿಳ್ ಆಂಟಿ ಮನೆಗೆ ಹೊಡೆದ.
ತಮಿಳ್ ಆಂಟಿ ಅಂದ್ರೆ ನಮಗೆ ಸಿಕ್ಕಾಪಟ್ಟೆ ಭಯ.ಒಂದು ಸರ್ತಿ ಪಕ್ಕದ ಬೀದಿಯ ಮೂರ್ತಿ ನಮ್ ಜೊತೆ ಕ್ರಿಕೆಟ್ ಆಡ್ಬೇಕಾದ್ರೆ ಅವರ ಮನೇಗೆ ಬಾಲ್ ಹೊಡೆದು ಔಟಾಗಿದ್ದ.ಆಗ ನಾನು ಬಾಲ್ ತರೋಕೆ ಒಳಗೆ ಹೋಗಿದ್ದೆ.ನಿಧಾನವಾಗಿ ಬೆಕ್ಕಿನ ಹಾಗೆ ಹೆಜ್ಜೆ ಹಾಕಿ ಗಿಡದ ಮಧ್ಯ ಸಿಕ್ ಹಾಕ್ಕೊಂಡಿದ್ದ ಬಾಲನ್ನ ತೆಗೆದು ಹಿಂತಿರುಗಿದೆ.
“ಏಯ್.. ನಿಂತ್ಕೊಳೋ.. ನಿಮ್ಗೇನು ಬುದ್ಧಿ ಇಲ್ವ?” ಅಂತ ಆಂಟಿ ಹಿಂದಿಂದ ನನ್ನ ನಿಲ್ಲಿಸಿದ್ರು.
ಅವತ್ತು ನಮ್ಮ ಖರ್ಮಕ್ಕೆ ತಮಿಳ್ ಆಂಟಿ ಮಗ ದಿನೇಶ ನಮ್ ಜೊತೆ ಆಡೋಕೆ ಬಂದಿರಲಿಲ್ಲ.ಅವ್ನು ಇದ್ದಾಗ ನಾವು ಅವ್ನನ್ನೆ ಕಳಿಸ್ತಾ ಇದ್ವಿ.ಆ ಆಂಟಿ ಅವ್ನನ್ನು ಬಿಡ್ತಿರಲಿಲ್ಲ.ತಮಿಳ್ ಅಲ್ಲಿ ಅವ್ನ್ಗು ಏನೋ ಬಯ್ಯೋರು.ನಮಗೆ ಅರ್ಥ ಆಗ್ತಿರಲಿಲ್ಲ.ಬಾಲ್ ತಂದ್ಕೊಟ್ಟು ಅರ್ಧಕ್ಕೆ ಆಟ ಬಿಟ್ಟು ಒಳಗೆ ಹೊರಟು ಹೋಗೋನು.ಬೇಜಾರಾಗೋದು ಪಾಪ ಆದ್ರೆ ಸಧ್ಯ ಬಾಲ್ ಸಿಕ್ತಲ್ಲ ಅಂತ ಮತ್ತೆ ಅವ್ನನ್ನ ಟೀಮ್ ಇಂದ ತೆಗೆದ್ ಹಾಕಿ ಆಟ ಮುಂದ್ವರೆಸ್ತಾ ಇದ್ವಿ.
ಆದ್ರೆ ಇವತ್ತು ಹಾಗಿಲ್ಲ.ನಾನು ಸಿಕ್ ಹಾಕ್ಕೊಂಡಿದ್ದೀನಿ.ನನ್ನ ಕಣ್ಣಲ್ಲಿ ಆಂಟಿ ಕಣ್ಣಿಟ್ಟು ನೋಡ್ತಾ ಇದಾರೆ. ಕೋಪದಲ್ಲಿ ಹತ್ರ ನಡ್ಕೊಂಡ್ ಬಂದು ನನ್ ಕೈಲಿದ್ದ ಬಾಲನ್ನ ಕಿತ್ಕೊಂಡು ಮನೆಯೊಳಗೆ ಹೋದ್ರು.
“ಆಂಟಿ.. ಮತ್ತೆ ಹೊಡ್ಯಲ್ಲ..ಪ್ಲೀಸ್ ಕೊಟ್ಬಿಡಿ ಪ್ಲೀಸ್” ಅಂತ ನನ್ನ ಮುಖದಲ್ಲಿ ಅಪರೂಪಕ್ಕೆ ಬರೋ ಸಿಕ್ಕಾಪಟ್ಟೆ ಮುದ್ದಾದ ನಗೂನ ಅವ್ರಿಗೆ ಹಂಗೆ ಬಿಟ್ಟೆ ನೋಡಿ.
ಉಪಯೋಗಕ್ಕೆ ಬರಲಿಲ್ಲ.ಅವ್ರು ಅದೇ ಗಂಟು ಮುಖ ಹಾಕ್ಕೊಂಡು ಮನೆಯೊಳಗೆ ನಡೆದುಬಿಟ್ರು. ಒಂದೆರಡು ನಿಮಿಷ ಕಾದೆ “ಪ್ಲೀಸ್ ಆಂಟಿ” ಅಂತ ಕೇಳ್ಕೊಂಡು.ಈ ಥರ ಕೇಳೋದು ನಮಗೆ ಸ್ಕೂಲಿಂದ ಅಭ್ಯಾಸ.ಕ್ಲಾಸಿಂದ ಹೊರಗೆ ಹಾಕಿ ಉಟಾಬೈಸ್ ಹೊಡೆಸ್ದಾಗ ಇದೇ ರಾಗ ಎಳ್ಯೋದು ನಾವು.ಅಷ್ಟು ಹೊತ್ತಿಗಾಗ್ಲೆ ಪದ್ದಿ,ನಮ್ಮಣ್ಣ ರವಿ,ಮೂರ್ತಿ,ಕಿರಣ ಎಲ್ರೂ ಬಂದು “ಆಂಟೀ.. ಆಂಟೀ” ಅಂತ ರಾಗ ಎಳೀತಿದ್ರು.ಕೊನೆಗೂ ಆಂಟಿ ಹೊರಗೆ ಬಂದ್ರು. ಆದ್ರೆ ಒಂದು ಕೈಯಲ್ಲಿ ಬಾಲು ಇನ್ನೊಂದು ಕೈಯಲ್ಲಿ ಚಾಕು!
ಎಲ್ರೂ ಬಾಯಿ ತೆಕ್ಕೊಂಡು ನೋಡ್ತ ಇದ್ರೆ,ತಮಿಳ್ ಆಂಟಿ ಆಲೂಗಡ್ಡೆ ಹೆಚ್ಚಿದ ಹಾಗೆ ಬಾಲನ್ನ ಚಾಕುವಿಂದ ಕಚ ಕಚ ಅಂತ ಹೆಚ್ಚಿಹಾಕ್ಬಿಟ್ರು. ನಮ್ಮೆದೆ ಒಡೆದು ಹೋಗಿತ್ತು. ಒಂದು ಕ್ಷಣ ಮೌನ.ಒಬ್ಬರ ಮುಖ ಒಬ್ಬರು ನೋಡ್ಕೊಂಡ್ವಿ.
“ಉಪ್ಪಿನಕಾಯಿ ಮಾಡ್ಕೊಂಡ್ ತಿನ್ನಿ” ಅಂತ ಎಲ್ಲರ ಹಿಂದೆ ನಿಂತು ಪಿಸುಗುಟ್ಟಿದ್ದ ನಮ್ಮಣ್ಣ ರವಿ. ಭಯ ತುಂಬಿದ್ದ ಎಲ್ಲರ ಮುಖದಲ್ಲೂ ಮುಗುಳ್ನಗೆ. ಬಂದ ದಾರಿಗೆ ಸುಂಕ ಇಲ್ಲ ಅನ್ನೋ ರೀತಿ ಎಲ್ರೂ ಅವತ್ತು ಮನೇಗೆ ವಾಪಸ್ ಹೋಗಿದ್ವಿ.
ಇವತ್ತು ಬಾಲ್ ಹೊಡೆದ ನಮ್ಮಣ್ಣ ಕೈಲಿದ್ದ ಬ್ಯಾಟನ್ನು ಕೋಪದಿಂದ ನೆಲಕ್ಕೆ ಕುಕ್ಕಿದ.ತಕ್ಷಣ ಕಿರಣ್ ಎದೆಗೆ ಗುದ್ದಿದಂತಾಯ್ತು.
“ಏಯ್.. ಬ್ಯಾಟ್ ಯಾಕೋ ಎಸೀತ್ಯ?ಬೇಕಾದ್ರೆ ನಿಮ್ ಬ್ಯಾಟ್ ತಂದು ಬಿಸಾಕು” ಅಂತ ಹೇಳ್ತ ಓಡಿ ಬಂದು ಆ ಬ್ಯಾಟನ್ನು ಕೈಗೆತ್ತುಕೊಂಡು ತನ್ನ ಮನೆಗೆ ಓಡಿ ಹೋಗಿ ಅದನ್ನು ಬಚ್ಚಿಟ್ಟು,ಏನೋ ಘನಕಾರ್ಯ ಮಾಡಿರುವಂತೆ ನಡೆದು ಬಂದ.
“ಬ್ಯಾಟು ಇಲ್ಲ ಬಾಲು ಇಲ್ಲ.. ವಾಪಸ್ ಹೋಗೋಣೇನ್ರಪ್ಪ?” ಪದ್ದಿ ಗುನುಗಿದ.
ನಮ್ಮಣ್ಣ ಇವತ್ತು ಬಾಲನ್ನು ಉಪ್ಪಿನಕಾಯಿಗೆ ಆಹುತಿ ನೀಡುವ ಮೂಡಿನಲ್ಲಿರಲಿಲ್ಲ.
“ಬಾಲ್ನ ಹಾಗೆ ಬಿಟ್ಟು ವಾಪಸ್ ಹೋಗೋದು ಬೇಡ ಕಣ್ರೋ” ಎನ್ನುತ್ತಾ ಏನೋ ಯೋಚಿಸ್ತಾ ನಿಂತ.ಈ ಕ್ಷಣದಲ್ಲಿ ನಮ್ಮಣ್ಣನ್ನ ನೋಡ್ತಿದ್ರೆ,ಕೋಪ ಬಂದಿರೋ ನಮ್ ಹೆಡ್-ಮೇಡಮ್ ಕಂಡ ಹಾಗೆ ಕಾಣ್ತಿದ್ದ,ಕೈಲೊಂದು ಕೋಲು ಕಮ್ಮಿ ಅಷ್ಟೆ.
“ಹೊಡ್ಯೋದ್ ಹೊಡೆದು ಬಿಟ್ಟು ಈಗ ಏನೋ ಮಾಡೋ ಹಾಗೆ ಯೋಚಿಸ್ತಾ ಇದ್ಯ?ನಡಿ ಹೋಗೋಣ” ಎನ್ನುತ್ತ ನಾನು ಕೂತಲ್ಲೆ ಎದು ನಿಂತೆ.
“ಬಾರೋ ಹೋಗೋಣ” ಎಂದು ನನ್ನ ತೋಳಿಗೆ ಕೈ ಹಾಕಿ ಎಳೆದುಕೊಂಡು ತಮಿಳ್ ಆಂಟಿ ಮನೆ ಗೇಟ್ ಮುಂದೆ ನಿಲ್ಲಿಸಿದ.
“ನಿಧಾನವಾಗಿ ಒಳಗೆ ಹೋಗಣ.ನೀ ಮುಂದೆ,ನಾ ನಿನ್ ಹಿಂದೇನೆ ಇರ್ತೀನಿ.ಹೆದರಿಕೆ ಬೇಡ.” ಎಂದ ರವಿ
“ನಾನ್ಯಾಕ್ ಯಾವಾಗ್ಲು ಮುಂದೆ ಹೋಗ್ಬೇಕು,ನೀನೆ ಹೋಗು.. ಮಗ್ನೆ” ಅಂತ ನಾನು ನಿಧಾನವಾಗೆ ಘರ್ಜಿಸಿದೆ.
“ವಿಡಿಯೋ ಗೇಮಲ್ಲಿ ಜಾಸ್ತಿ ಆಟ ಯಾರಿಗೆ ಬೇಕಾಗಿರೋದು?ಹಠ ಮಾಡಿ ಆಡ್ತ್ಯ? ಸುಮ್ನೆ ಒಳಗ್ ಹೋಗು..”
“ನಾನ್ ಮ್ಯಾಚಲ್ಲು ಇರಲಿಲ್ಲ ಕಣೋ.. ಎಲ್ಲಾ ಕಡೆ ಮೋಸ ಮಾಡ್ತ್ಯಲ್ಲ” ಎಂದು ಅಳಲು ತೋಡ್ಕೊತಿದ್ದಂತೆ ನಮ್ಮಣ್ಣ ನಿಧಾನವಾಗಿ ಗೇಟ್ ತೆಗೆದು ನನ್ನ ಒಳಗೆ ತಳ್ಳಿದ.
ನಿಧಾನವಾಗಿ ಒಳಗೆ ನುಸುಳಿಕೊಂಡ್ವಿ. ಹಿಂದೆ ನಮ್ಮಣ್ಣ ಇದಾನೋ ಇಲ್ವೊ ಅನ್ನೂ ಭಯಕ್ಕೆ ತಿರುಗಿ-ತಿರುಗಿ ನೋಡ್ತಾ ಇದ್ದೆ.
“ಹಿಂದೇನೆ ಇದ್ದೀನಿ ಹೋಗಲೊ” ಅಂತ ಬೈದ ರವಿ.
ಓದದೆ ಪರೀಕ್ಷೆಗೆ ಹೋದಾಗ್ಲು ಇಷ್ಟು ಭಯ ಆಗ್ತಿರಲಿಲ್ಲ.ಹಾಗೆ ಒಳಗೆ ಹೋಗಿ ಪೊದೆ ಸಂದಿಯಲ್ಲಿ ಕೈ ಹಾಕಿ ಹುಡುಕ್ತಾ ಇದ್ದೀನಿ.
“ರಘು.. ಲೇಯ್… ಬಾ ಇಲ್ಲಿ”
ಘಾಬರಿಯಿಂದ ತಿರುಗಿ ನೋಡಿ “ಬಾಲ್ ಸಿಕ್ತ?” ಎಂದೆ
“ಇಲ್ಲ.. ಬಾ ಇಲ್ಲಿ..” ಎಂದು ಧ್ವನಿಯಲ್ಲಿ ಆಶ್ಚರ್ಯವನ್ನು,ಖುಷಿಯನ್ನು ವ್ಯಕ್ತ ಪಡಿಸಿದ ನಮ್ಮಣ್ಣ.ಮಂಡಿ ಊರಿಕೊಂಡೇ ಅಂಬೆಗಾಲಲ್ಲಿ ಅವನ ಬಳಿ ಹೋದೆ.ಮನೆಯ ಕಿಟಕಿಯ ಕೆಳಗೆ ಅವಿಸಿಕೊಂಡಿದ್ದವನು ನನ್ನ ಕಿವಿಯಲ್ಲಿ ಏನೋ ಹೇಳಿದ. ನನಗೆ ಸರಿಯಾಗಿ ಕೇಳಿಸಲಿಲ್ಲ.
“ಏನು?” ಎಂದೆ.
“ಥತ್.. ಮನೆಯೊಳಗೆ ನಾವ್ ಕಳ್ಕೊಂಡಿದ್ವಲ್ಲ ಬ್ಯಾಟು.. ಅದನ್ನ ನೋಡಿದೆ” ಎಂದ.
ಕೂತಲ್ಲೆ ಪಲ್ಟಿ ಹೊಡೆದ ಹಾಗಾಯ್ತು ನನಗೆ.” ನಮ್ಮ favourite ಬ್ಯಾಟು. ಎಷ್ಟು ಪ್ರೀತಿಯಿಂದ ನೋಡ್ಕೊತಿದ್ವಿ ಈ ಬ್ಯಾಟ್ನ. ಅದು ತಮಿಳ್ ಆಂಟಿ ಮನೇಲಿದ್ಯ? ಅಂದ್ರೆ ಕದ್ದು ಬಿಟ್ಟಿದಾರ? ಅಯ್ಯೋ ದೇವ್ರೆ.. ಈ ಉಪ್ಪಿನಕಾಯಿ ಆಂಟಿ ಹತ್ರ ನಮ್ ಬ್ಯಾಟಿದೆ.. ಆದ್ರೆ ಹೇಗೆ ವಾಪಸ್ ತೊಗೊಳೋದು.ಓಂ ಶ್ರೀ ಗಣೇಶಾಯ ನಮಃ”
“ಬಾ ಇಲ್ಲಿ ನೋಡು” ಎಂದು ನಿಧಾನವಾಗಿ ಕಿಟಕಿಯ ಕಂಭಿಗೆ ಕೈ ಹಾಕಿ ಮೇಲೆದ್ದು ಇಣುಕಿ ನೋಡಿದ್ವಿ.
ಕತ್ತಲಲ್ಲೂ ಎದ್ದು ಕಾಣ್ತಿತ್ತು ಬ್ಯಾಟು. ಸಂದೇಹಾನೆ ಇಲ್ಲ.. ಅದು ನಮ್ಮದೇ ಬ್ಯಾಟು. ನಿಧಾನವಾಗಿ ನೆಲಕ್ಕೆ ಕುಸಿದು ಕೂತ್ಕೊಂಡ್ವಿ.ಯೋಚನೆ ಮಾಡ್ತ ಬಲಕ್ಕೆ ತಿರುಗಿದರೆ ಬಾಲ್ ಕಾಣಿಸ್ತು.ಸರಕ್ಕನೆ ಅಂಬೆಗಾಲಲ್ಲಿ ಓಡಿ ಆ ಬಾಲ್ನ ತೊಗೊಂಡು ಜೇಬೊಳಗೆ ಹಾಕ್ಕೊಂಡು ವಾಪಸ್ ಓಡಿ ಬಂದು ನಮ್ಮಣ್ಣನ ಪಕ್ಕ ಕೂತೆ.ಉದ್ವೇಗದಲ್ಲಿ ನಮ್ಮಣ್ಣ ಮೇಲುಸಿರು ಬಿಡುತ್ತಾ ನನ್ನ ಕಡೆ ತಿರುಗಿದ.
“ನಮ್ ಜೊತೆ ಆಡ್ತಿದ್ದ ದಿನೇಶಾನೆ ಬ್ಯಾಟ್ ಕದ್ದುಬಿಟ್ಟಿದಾನೆ ರಘು.ನಮ್ ಫ಼ೇವರೇಟ್ ಬ್ಯಾಟು.. ನೀನು ಎಷ್ಟು ರನ್ನುಗಳನ್ನ ಹೊಡೆದಿದ್ಯ ಅದ್ರಲ್ಲಿ.. ಆ ಬ್ಯಾಟು ಈಗ ಇಲ್ಲಿ.. ತಮಿಳ್ ಆಂಟಿ ಮನೇಲಿ ಇದೆ.ಯಾವತ್ತೋ ರೋಡಲ್ಲೆ ಮರೆತು ಹೋದಾಗ ಅಬೇಸ್ ಮಾಡಿ ಬಿಟ್ಟಿದಾರೆ.”
“ಅಮ್ಮ ನಮಗೆ ಎಷ್ಟು ಹೊಡೆದಿದಾಳೆ ಈ ಬ್ಯಾಟು ಕಳ್ಕೊಂಡ್ವಿ ಅಂತ. ಎಷ್ಟು ಅತ್ತಿದಿವಿ ನಾವು.ಆಮೇಲೆ ಬೇರೆ ಬ್ಯಾಟು ಕೊಡ್ಸ್ಕೊಳ್ಳೋಕೆ ಎಷ್ಟು ಕಷ್ಟ ಪಟ್ಟಿದಿವಿ.. ಇನ್ನು ಒಂದು ಬ್ಯಾಟ್ ತೊಗೊಳ್ಳೋಕೆ ಆಗಿಲ್ಲ.. ನಮ್ ಬ್ಯಾಟ್ ನೋಡಿದ್ರೆ ಇಲ್ಲಿದ್ಯಲ್ಲೊ ರವಿ?”
“ಅವ್ರ ಮಗ ಇದ್ದಾಗ ಬಾಲ್ ಹೊಡಿದ್ರೆ ಏನು ಮಾಡಲ್ಲ.ನಾವು ಬಾಲ್ ಹೊಡೆದ್ರೆ ಮಾತ್ರ ಪ್ರಾಬ್ಲಮ್ಮು ಇವ್ರಿಗೆ.ಸಾಯ್ತಾರೆ…ಇನ್ನು ಸುಮ್ನಿರೋದ್ ಬೇಡ.ನಮ್ ಬ್ಯಾಟ್ ಕದ್ದವ್ರನ್ನ ಬಿಡೋದ್ ಬೇಡ.ಅವ್ರು ನಮ್ಮಿಂದ ಹೇಗೆ ಆ ಬ್ಯಾಟ್ನ ಕದ್ದ್ರೋ ನಾವು ಆ ಬ್ಯಾಟ್ನ ಹಾಗೆ ಅವ್ರಿಂದ ಕದ್ಯೋಣ.”
ಆಶ್ಚರ್ಯದಿಂದ,ಭಯದಿಂದ ಅವ್ನ ಕಡೆ ನೋಡ್ತ.. “ಏನ್ ಹುಚ್ಚ್ ಹಿಡಿದಿದ್ಯ ನಿನಗೆ?ಕದಿಯೋದು ಅಂದ್ರೆ ಏನರ್ಥ ಅಸಹ್ಯ” ಅಂತ ಹಲ್ಲು ಕಚ್ಚಿಕೊಂಡು ಅವನನ್ನು ಕೇಳಿದೆ.ನಿಜ ಹೇಳ್ಬೇಕು ಅಂದ್ರೆ ನಂಗೂ ಕದಿಯಬಹುದು ಅನ್ನೊ ಕುತೂಹಲ ಹುಟ್ಕೊಳ್ತು. “ಹೇಗ್ ಕದೀತ್ಯ?” ಅಂತ ಶಂಕೆ ತುಂಬಿರೋ ಧ್ವನಿಯಲ್ಲಿ ಕೇಳಿದೆ.
“ಇಲ್ಲೆ ಕೂತಿರು.. ಈಗಲೆ ತಂದು ಬಿಡ್ತೀನಿ.ತಡ ಮಾಡೋದ್ ಬೇಡ” ಎಂದು ಸ್ವಲ್ಪ ದೂರ ಸರಿದ ನಮ್ಮಣ್ಣ.
ತಲೆಯೆತ್ತಿ ನೋಡಲು ನಮ್ ಹುಡ್ಗೂರು ಕಾಂಪೌಂಡ್ ಸಂದಿಯಿಂದ ಗುಟ್ಟಾಗಿ ನೋಡ್ತಾ ಇದಾರೆ.ಯಾವ್ದೋ ವೀಡಿಯೋ ಗೇಮಿದ್ದಂತೆ ಇದೆ ಇದು ಅಂತ ಅನ್ನಿಸ್ತಾ ಇತ್ತು.ಯಾವ್ದು ಅಂತ ಗೊತ್ತಾಗ್ತಿಲ್ಲ.
 ನಮ್ಮಣ್ಣ ನಿಧಾನವಾಗಿ ನೆಲಕ್ಕೆ ಮಂಡಿ ಊರಿ ತಮಿಳ್ ಆಂಟಿ ಮನೆಯ ಬಾಗಿಲ ಬಳಿ ನಡೆದು ಹೋದ.ನಾನು ಮತ್ತೆ ಕಿಟಕಿಯೋಳಗೆ ಇಣುಕೆ ನೋಡಿದೆ.ಬಾಗಿಲಿನ ಚಿಲಕ ಹಾಕಿರಲಿಲ್ಲ.ತಳ್ಳಿದರೆ ತೆರೆದುಕೊಳ್ಳುವಂತಿತ್ತು.ರವಿ ಬಾಗಿಲ ಎದುರು ತೆವಳುತ್ತಿದ್ದಂತೆ ನಾನು ಮೇಲುಸಿರು ಬಿಡುತ್ತ ಕೆಳಗೆ ಕೂತೆ.ಬಾಗಿಲು ತೆರೆದ ಸದ್ದು ನನ್ನ ಕಿವಿಗೆ ಕೇಳ್ತು.ಎದ್ದು ಕಿಟಕಿಯೊಳಗೆ ಇಣುಕಿದೆ.ನಮ್ಮಣ್ಣನ ಕೈ ಒಳಗೆ ಹೆಜ್ಜೆ ಇಡುತ್ತಿದ್ದದ್ದು ಕಾಣಿಸಿತು.ಮುಂದಿನ ಕ್ಷಣಗಳಲ್ಲಿ ನಡೆದದ್ದು ನಮ್ ಖರ್ಮ. ನಿಧಾನವಾಗಿ ನನ್ನ ನೋಟವನ್ನ ಬಲಕ್ಕೆ ಹಾಯಿಸಿದೆ. ಕೋಣೆಯ ಒಳಗಿನಿಂದ ತಮಿಳ್ ಆಂಟಿ ಅಂಗಡಿಗೆ ಹೋಗಲು ತಯಾರಾಗಿ ಕೈಲೊಂದು ಚೀಲ ಹಿಡಿದು ಹೊರಗೆ ನಡೆದರು.ಹೊರಗೆ ಜಗುಲಿಯಲ್ಲಿ ನಡೆಯುತ್ತಿದ್ದ ಕಳ್ಳತನವನ್ನು ನೋಡಲು ಅವ್ರು ಒಳಗಿದ್ದ ಕೋಣೆಯಿಂದ ನಡೆದು ಬರಬೇಕು.ಇಲ್ಲಿ ನಮ್ಮಣ್ಣ ಒಳಗೆ ಬಂದಿದ್ದಾನೆ.ತಮಿಳ್ ಆಂಟಿ ಮತ್ತೊಂದು ದೇವರ ಮನೆ ದಾಟಿ ನಡೆಯುತ್ತಿದ್ದಾರೆ.ಇವನ ಕೈ ನಿಧಾನವಾಗಿ ಬ್ಯಾಟ್ ಬುಡಕ್ಕೆ ಹೋಯ್ತು.ಆಂಟಿ ಮತ್ತೊಂದು ಕೋಣೆಯೊಳಗೆ ಹೋದ್ರು.ಇವನ ಬೆರಳುಗಳು ಬ್ಯಾಟ್ ಬುಡವನ್ನು ಸೋಕುತ್ತಿದೆ.ನಾನು ಕೂಗುವ ಹಾಗೂ ಇಲ್ಲ ಬಿಡುವ ಹಾಗೂ ಇಲ್ಲ.ನನ್ನನ್ನು ಬಿಟ್ಟು ಆಟವಾಡಿದ್ರು,ಸ್ಕೂಲಿಂದ ಒಬ್ಬನನ್ನೇ ಬಿಟ್ಟು ನಡ್ಕೊಂಡ್ ಬಂದ್ರು,ಸೈಕಲ್ ನನ್ನ ಕೈಲಿ ತಳ್ಳಿಸಿದ್ರು,ಚಾಕ್ಲೇಟ್ ನನ್ನ ಬಿಟ್ಟು ತಿಂದಿದ್ರು ಅವ್ನು ನಮ್ಮಣ್ಣ.ಪ್ರೀತಿ ಉಕ್ಕಿ ಬಂತು.
“ರವಿ..ರವೀ.. ಆಂಟಿ” ಅಂದು ಕೂಗು ಹಾಕಿದೆ.
ಘಾಬ್ರಿಯಿಂದ ಕೈಗೆ ಸಿಕ್ಕಿದ್ದ ಬ್ಯಾಟು ಜಾರಿ ಕೆಳಗೆ ಬಿತ್ತು.ಧಡ್ಡೆಂದು ಶಬ್ಧವಾಯ್ತು.ಎರಡನೇ ಕೋಣೆಯಲ್ಲಿದ್ದ ಆಂಟಿ ಹೊರಗೆ ಓಡಿ ಬಂದು ತಿರುಗಿ ಓಡಲು ಪ್ರಯತ್ನ ಪಡ್ತಿದ್ದ ರವಿಯ ಬೆನ್ನಿನ ಮೇಲೆ ಕೈಚೀಲದಲ್ಲಿ ಗುದ್ದಿದರು.ಅವ್ನು ಅಲ್ಲೆ ಬಿದ್ದ. ನಾನು ಹೊರಗೆ ಕುಸಿದು ಬಿದ್ದೆ.ತಲೆಯಲ್ಲಿದ್ದ ಶಕ್ತಿ ನೆಲ್ಲಕ್ಕೆ ಜಾರಿದಂತಾಯ್ತು.ಕೈಕಾಲು ಅಲ್ಲಾಡಿಸಲಾಗ್ತಿಲ್ಲ.ಹೊರಗಿದ್ದ “ನಮ್ ಹುಡ್ಗೂರು” ನಮ್ ಹುಡ್ಗೂರಾಗಿರಲಿಲ್ಲ.ಎಲ್ರೂ ಓಟ್ಟು!
ರವಿ ಕಾಲರ್ ಪಟ್ಟಿ ಹಿಡಿದು ಹೊರಗೆ ಎಳೆದು ಕೊಂಡು ಬಂದ್ರು ಆಂಟಿ.
“ಇಬ್ರೂ ಕಳ್ರೂ ನಮ್ಮನೇಗೆ ಬಂದು ಕದೀತಿರ?” ಅಂತ ಸ್ವಲ್ಪ ತಮಿಳಿನಂತೆ ಕನ್ನಡ ಮಾತಾಡಿದ್ರು.
“ಬಾ..ಬಾ..ಬ್..ಬಾಲ್ ಬಿದ್ದಿತ್ತು ಆಂಟಿ.ಒಳಗೆ ಹೊರಟು ಹೋಗಿತ್ತು.. ಅದಕ್ಕೆ..” ಎಂದು ಉಸಿರಾಡಿದೆ ನಾನು.
ನನ್ನ ಜುಟ್ಟು ಹಿಡಿದು ಜಗ್ಗಿ ಮೇಲೆ ಎತ್ತಿದರು.ಇಬ್ರಿಗೂ ಕಪಾಳ ಮೋಕ್ಷವಾಯ್ತು.
“ಬ್ಯಾಟ್ ಕದಿಯೋಕೆ ಬಂದಿದ್ದೀರ ಅಂತ ನಂಗೆ ಗೊತ್ತು.ಬೇವರ್ಸಿಗಳ.. ಥು!” ಅಂತ ಉಗಿದ್ರು.
ಇಷ್ಟೆಲ್ಲಾ ಆದ್ರು ನಮ್ಮಣ್ಣ ವೀರ..ಸುಮ್ನೆ ಬರೋದು ಬಿಟ್ಟು – “ಹಂಗೆಲ್ಲ ಬೈಬೇಡಿ ನೀವು..ಸರಿ ಇರಲ್ಲ” ಅಂತ್ ಮೂಗು ಹಿಗ್ಗಿಸಿ ಗದರಿಸಿದ.
“ಧಿಮಾಕು ನೋಡು.ಮಾಡ್ತೀನಿರು!” ಎನ್ನುತ್ತಾ ಅಲ್ಲೇ ತೆಂಗಿನ ಮರದ ಕೆಳಗೆ ಬಿದ್ದ ಪೊರಕೆ ಎತ್ತಿ ನಮ್ಮತ್ತ ಬೀಸಿದ್ರು.ನಾವು ಅಲ್ಲಿಂದ ಓಡಿ ಹೊರ ಬಿದ್ವಿ. 
ಸೂರ್ಯ ಮುಳುಗಿ ಕತ್ತಲು ಕವೆದಿತ್ತು.ಮನದಲ್ಲಿ ಏನೋ ಒಂಥರಾ ದುಗುಡ.ಮನೆಯಲ್ಲಿ ಈ ವಿಷಯ ತಿಳಿಯದ ಹಾಗೆ ನಮ್ಮಲ್ಲೆ ಕಾಪಾಡ್ಕೊಳ್ಬೇಕು.ನಮ್ಮಣ್ಣನ ಮುಖ ಕೆಂಪಗೆ ಟೊಮಾಟೋ ಥರ ಆಗಿತ್ತು.ಟೀ.ವಿ ನೋಡುವ ನೆಪವಷ್ಟೆ,ಟೀ.ವೀಲು ತಮಿಳ್ ಆಂಟಿ ಹಿಡಿದ ಪೊರ್ಕೇನೆ ಕಾಣಿಸ್ತಾ ಇತ್ತು.ನಮಗೆ ಅತ್ಯಂತ ಪ್ರಿಯವಾದ ಬ್ಯಾಟು ಅವರ ಮನೇಲಿದೆ.ಆದ್ರೆ ಅದು ನಮಗೆ ಬೇಕು.ಏನ್ ಮಾಡೋದು?
ಒಂದು ವರ್ಷದ ಕೆಳಗೆ ನಮ್ಮಣ್ಣ ರವಿ ಕ್ರಿಕೆಟ್ ಕೋಚಿಂಗ್ ಸೇರೋಕೆ ಹಠ ಮಾಡಿದ್ದ.ನಮ್ಮ ಸ್ಕೂಲಲ್ಲೇ ಪರಮೇಶ್ ಸಾರು ಪಕ್ಕದಲ್ಲಿದ್ದ ಖಾಲಿ ಜಾಗದಲ್ಲಿ ಈ ಶಿಬಿರ ಶುರು ಮಾಡಿದ್ದ್ರು.ನಮ್ಮಣ್ಣ ಸೇರುತ್ತಾನೆ ಅಂದ್ರೆ ನಾನು ಸೇರಲೇ ಬೇಕಲ್ಲ.ಅದು ನಮ್ಮ ಮನೆಯ ನಿಯಮ,ಸರಿ ಸ್ವಲ್ಪ ದಿನ ಅತ್ತು ಕರೆದು ಮಾಡಿದ ಮೇಲೆ ನಮ್ಮ ತಾತ ಅಮ್ಮನ ಕೈಗೆ ಹಣ ಕೊಟ್ಟು “ಸೇರಿಸು ಪಾಪ.. ಮಕ್ಳು” ಅಂತ ಹಿತವಚನ ನುಡಿದ್ರು.ಆಗ ತೊಗೊಂಡಿದ್ದು ಈ ಬ್ಯಾಟು.ಚಡ್ಡಿ ಹಾಕೋದು ಮರೆತು ಬಿಡ್ತಿದ್ವೇನೋ ಆದ್ರೆ ಕೈಯಲ್ಲಿ ಈ ಬ್ಯಾಟು ಹಿಡಿಯೋದನ್ನ ಮರೀತಿರಲಿಲ್ಲ.
ಒಂದು ಬಾಲ್ ಕಳೆದು ಹಾಕ್ಕೊಂಡ್ರೆ ಬರೆ ಎಳಿತಿದ್ದ ನಮ್ಮಮ್ಮ ಸಾವಿರಾರು ರೂಪಾಯಿ ಕೊಟ್ಟು ಬ್ಯಾಟ್ ಕೊಡಿಸಿದ್ರು,ಅದನ್ನ ಕಳೆದು ಹಾಕ್ಕೊಂಡ್ರೆ ಹೆಂಗ್ ಇರಬಹುದು?
ಅವತ್ತು ಸಂಜೆ ನಮ್ಮ ಪಕ್ಕದ ಬೀದಿಯ ನಿಖಿಲ್ ಮತ್ತು ತಂಡದ ಮೇಲೆ ವಿವೇಕಾನಂದ ಫ಼ೀಲ್ಡಲ್ಲಿ ಮ್ಯಾಚಿತ್ತು.ಪ್ರತಿ ವಾರ ಇದ್ದ ಹಾಗೆ ಸಂಜೆ ೪ಕ್ಕೆ ಶುರು ಮಾಡಿ ಎರಡು ಮ್ಯಾಚಾಡ್ತಿದ್ವಿ.ಈ ವಾರ ಸ್ವಲ್ಪ ಬೇಗ ಮುಗಿದಿತ್ತು.ನಾವು ಎರಡೂ ಪಂದ್ಯಗಳನ್ನು ಇನ್ನೇನು ಗೆದ್ವಿ ಅನ್ನೋವಾಗ ಸೋತಿದ್ವಿ.ಅವ್ನಿಂದ ಸೋತಿದ್ದು ಅಂತ ಇವ್ನು,ಇವ್ನಿಂದ ಸೋತಿದ್ದು ಅಂತ ಅವ್ನು.. ಇದೇ ವಿಷಯವಾಗಿ ಜಗಳ ರಸ್ತೆ ಪೂರ ಮಾಡ್ಕೊಂಡು ಕೊನೇಗೆ ಮನೆಗೆ ಬಂದ್ವಿ.ಸುಸ್ತಾಗಿತ್ತು.ಮುಖಾನು ತೊಳಿಯದೆ [ಅಭ್ಯಾಸಾನೆ ಇರಲಿಲ್ಲ ಅಂತಿಟ್ಕೊಳ್ಳಿ] ಗಪ-ಗಪ ಅಂತ ಅಮ್ಮ ಮಾಡಿಟ್ಟಿದ್ದ ಅವ್ಲಕ್ಕಿ ತಿಂದ್ವಿ.
“ಬ್ಯಾಟೆಲ್ಲಿ ಇಟ್ಟಿದ್ಯೋ ರಘು?” ಪ್ರೀತಿಯಿಂದ ಕೇಳಿದ ನಮ್ಮಣ್ಣ
“ನಂಗೊತ್ತಿಲ್ಲ” ಪ್ರೀತಿಯಿಂದಲೇ ಉತ್ತರ ನೀಡಿದೆ.
“ಮತ್ತೆಲ್ಲಿ ಹೋಯ್ತು ಬ್ಯಾಟು?ಎಲ್ಲೂ ಕಾಣಿಸ್ತಾ ಇಲ್ಲ?” ಸ್ವಲ್ಪ ಕೋಪದಲ್ಲಿ ಕೂಗಿದ ನಮ್ಮಣ್ಣ
“ನಂಗೇನೋ ಗೊತ್ತು.ಮ್ಯಾಚಾದ್ಮೇಲೆ ನೀನೆ ಹಿಡ್ಕೊಂಡ್ ಬರೋದು ಅದನ್ನ..ಅಲ್ಲಾಡಿಸ್ಕೊಂಡು.ನನ್ ಕೈಗೆ ಯಾವಾಗ್ ಕೊಡ್ತೀಯ?” ಅಷ್ಟೇ ಕೋಪದಲ್ಲಿ ಧ್ವನಿ ಏರಿಸಿ ನಾನು.
“ಸುಮ್ನೆ ಎಲ್ಲಾದಕ್ಕು ಕಿರೀಕ್ ಮಾಡ್ಬೇಡ.ಬ್ಯಾಟ್ ಕಾಣಿಸ್ತಿಲ್ಲ..ಎಲ್ಲಾ ನಿನ್ನಿಂದಾನೆ.” ಸಿಕ್ಕಾಪಟ್ಟೆ ಕೋಪದಲ್ಲಿ ನಮ್ಮಣ್ಣ.
“ಎಲ್ಲಾ ನನ್ ಮೇಲೆ ಹಾಕೋ.. ಮಾಡೋದೆಲ್ಲ ಮಾಡಿ.ಅಮ್ಮ ಬೈತಾರೆ ಅಂತ ಭಯ ನಿಂಗೆ.ಅದಕ್ಕೆ ನನ್ ಮೇಲೆ ಹಾಕ್ತಿದ್ಯ?” ಅಷ್ಟೆ ಸಿಕ್ಕಾಪಟ್ಟೆ ಕೋಪದಲ್ಲಿ ನಾನು.
ಮರು ಕ್ಷಣವೇ ನನ್ನ ಜುಟ್ಟು ಅವನ ಕೈಯಲ್ಲಿ ಸಿಕ್ಕು,ಅವನ ಮುಖ ನನ್ನ ಬೆರಳುಗಳಿಂದ ಪರ್ಚಿ.. ಮಹಾಯುದ್ಧ ನಡೀತಿದ್ದಾಗ..
“ಬ್ಯಾಟ್ ಕಳೆದು ಹಾಕ್ಕೊಂಡ್ ಬಂದು ನಾಯಿಗಳ ಥರ ಕಚ್ಚಾದ್ತಿರೋದ್ ನೋಡು.. ದುಡ್ಡಿನ ಬೆಲೆ ಇಲ್ಲ” ಎಂದು ಬೈಯುತ್ತಾ ಪಟಾರ್ ಪಟಾರ್,ಇಬ್ಬರ ಕೆನ್ನೆಗೂ ಅವರ ಕೈಯಿಂದ ಜೋರಾದ ಮುತ್ತು.
ನಮ್ಮ ಪ್ರೀತಿಯ ಬ್ಯಾಟನ್ನ ಇಬ್ರೂ ಮರೆತು ಮೈದಾನದಲ್ಲೇ ಬಿಟ್ಟು ಬಂದಿದ್ವಿ.ಕತ್ತಲಾದ್ಮೇಲೆ ಓಡಿ ಹೋಗಿ ನೋಡಿದಾಗ ಅದು ಅಲ್ಲಿರಲಿಲ್ಲ.ಸ್ವಲ್ಪ ದಿನ ಹಗಲು ರಾತ್ರಿ ಬೈಗುಳ ಕೇಳಿ ಮಲಗುವ ಸ್ಥಿತಿ ನಮ್ಮದು.ನನ್ನ ನಮ್ಮಣ್ಣನ ಮನಸಲ್ಲಿ ಅಚ್ಚಾಗಿತ್ತು ಆ ನೆಚ್ಚಿನ ಬ್ಯಾಟು.
ಆದ್ರೆ ಈಗ.. ಅದು ತಮಿಳ್ ಆಂಟಿ ಮನೇಲಿ.ದಿನೇಶ ನಮ್ ಬ್ಯಾಟ್ನ ಕದ್ದು ನಮಗೇ ಚಾಕ್ಲೇಟ್ ತಿನ್ನಿಸಿದಾನೆ.ಹೇಗಾದ್ರು ಮಾಡಿ ಆ ಬ್ಯಾಟ್ನ ನಾವ್ ನಮ್ಮದಾಗಿಸ್ಕೋಬೇಕು.
ರಾತ್ರಿ ಮಲಗೋ ಸಮಯ.ಸಂಜೆಯಿಂದ ಹೆಚ್ಚು ಮಾತಿಲ್ಲ.ಏನೋ ಸರಿಯಿಲ್ಲ ಅಂತ ಅಮ್ಮಂಗೂ ಅನುಮಾನ ಬಂದಿದೆ.ಅಕ್ಕ-ಪಕ್ಕ ಹಾಕಿರುವ ಮಂಚದ ಮೇಲೆ ನಾನು ನಮ್ಮಣ್ಣ ಮಲಗಿದ್ವಿ,ನಿದ್ದೆ ಬಂದಿಲ್ಲ.ನಾನು ಮುಸುಕು ಹಾಕಿಕೊಂಡು ಯೋಚನೆಯಲ್ಲಿದ್ದೀನಿ. ನಿಧಾನವಾಗಿ ಮುಸುಕು ಕೆಳಗೆ ಎಳೆದ ನಮ್ಮಣ್ಣ.
“ನಮ್ ಬ್ಯಾಟು ನಾಳೆ ನಮ್ಮನೇಲಿ ಇರತ್ತೆ.ನಾವೆ ಹೋಗಿ ಅದನ್ನ ತರೋಣ” ಎಂದು ಅಣ್ಣ ಪಿಸುಗುಟ್ಟಿದ.ಅವನ ಮಾತಲ್ಲಿ ಧೃಢತೆ ಇತ್ತು.
“ಆದ್ರೆ ಹೇಗೆ?”
ರವಿ ಒಂದು ಸೂಪರ್-ಸುಪ್ರೀಮ್ ಐಡಿಯಾ ಕೊಟ್ಟ.
ಮರು ದಿನ ಭಾನುವಾರ.ಎಂದಿನಂತೆ ಸ್ನಾನ,ತಿಂಡಿ,ವಿಡಿಯೋ ಗೇಮೂ ಇತ್ಯಾದಿ ಇತ್ಯಾದಿಗಳು ಮುಂದೆವರೆದಿದ್ದವು.ಈ ವಾರ ಪಕ್ಕದ ಬೀದಿಯವರ ಮೇಲೆ ಮ್ಯಾಚ್ ಕೂಡ ಇರಲಿಲ್ಲ.ಹಾಗಾಗಿ ಸಂಜೆ ನಾಲ್ಕರವರೆಗೂ ಹಾಗೋ ಹೀಗೋ ಕಾಲ ಕಳೆದ್ವಿ.ಅರ್ಧ ದಿನ ಕಳೆಯೋ ಅಷ್ಟ್ರಲ್ಲಿ ಒಂದು ವಾರ ಶಾಲೆಗೆ ಹೋದಂತಾಗಿತ್ತು.
ಎಲ್ಲರೂ ಆಟ ಆರಂಭ ಮಾಡಿದ್ವಿ.ಇವತ್ತು ನಮ್ಮಣ್ಣ ನನ್ನ ಬಿಟ್ಟು ಆಟ ಆರಂಭ ಮಾಡೋಕೆ ಸಾಧ್ಯಾನೆ ಇರಲಿಲ್ಲ.ನಮ್ಮ ತಂತ್ರ ಕೆಲಸ ಮಾಡ್ಬೇಕು ಅಂದ್ರೆ ನಾವಿಬ್ರು ಇರಲೇ ಬೇಕು.ನಾನು ನಮ್ಮಣ್ಣ ಎಂದಿನಂತೆ ಬೇರೆ ಬೇರೆ ತಂಡದಲ್ಲಿ ಆಡ್ತಿದ್ವಿ.ಒಂದು ಮ್ಯಾಚು ಮುಗೀತು.ಎರಡನೇ ಮ್ಯಾಚ್.ನಮ್ಮ ತಂಡದಲ್ಲಿ ಪದ್ದಿ ಅತ್ಯುತ್ತಮವಾಗಿ ಆಡಿ ೬ ಓವರ್ ಅಂತ್ಯಕ್ಕೆ ೪೨ ರನ್ನುಗಳನ್ನ ಗಳಿಸಿದ್ದ. ನಮ್ಮಣ್ಣನ ತಂಡದವ್ರು ಬ್ಯಾಟಿಂಗ್.ಕಿರಣ್ ಮತ್ತು ಮೂರ್ತಿ ೨೮ ರನ್ನುಗಳಿಗೆ ಔಟಾಗಿದ್ರು.ಒಂದು ಓವರ್ ೧೫ ರನ್ ಬೇಕಿತ್ತು. ನಮ್ಮಣ್ಣ ಬ್ಯಾಟಿಂಗ್. ಮೊದಲ ಬಾಲ್ ಜೋರಾಗಿ ಬೀಸಿದ.ನೇರ ಬೌಂಡ್ರೆ ಪಾಲು.ಮುಂದಿನ ಎಸೆತ ಕೂಡ ಹಾಗೆ ಆಯ್ತು.
೪ ಬಾಲ್.. ೭ ರನ್.ಮತ್ತೊಂದು ಬೌಂಡ್ರಿ. ೩ ಬಾಲ್ ೩ ರನ್.
ಪದ್ದಿ ಬೌಲಿಂಗ್,ರವಿ ಬ್ಯಾಟಿಂಗ್.. ಜೋರಾಗಿ ಬೀಸಲು ಯತ್ನ ಆದ್ರೆ ಬಾಲ್ ನೇರ ಕೀಪರ್ ಕೈಗೆ.
೨ ಬಾಲ್ ೩ ರನ್. ಮತ್ತೊಂದು ಮಿಸ್. ಬಾಲ್ ಕನೆಕ್ಟ್ ಆಗ್ತಿಲ್ಲ. ರವಿ ತಂಡ ಸೋಲೋದು ಖಚಿತ ಅಂತ ನಮಗನ್ನಿಸೋಕೆ ಶುರು ಆಯ್ತು.
೧ ಬಾಲ್ ೩ ರನ್.ಈ ಬಾಲ್ ಬೌಂಡ್ರಿ ಹೊಡೆದ್ರೆ ಗೆಲ್ಲೋ ಸಾಧ್ಯತೆ ಇನ್ನೂ ಇದೆ. ಬ್ಯಾಟಿಂಗ್ ಚೆನ್ನಾಗಾಡಿರೋ ಪದ್ದಿ ಬೌಲಿಂಗ್ ಕೂಡ ಚೆನ್ನಾಗ್ ಮಾಡ್ತಾನ? ಬಾಲ್ ಪದ್ದಿ ಕೈಯಿಂದ ಹಾರಿ ನೆಲ್ಲಕ್ಕೆ ತಾಕಿ ರವಿಯ ಕಡೆಗೆ ತೇಲಿ ಹೋಯ್ತು.ರವಿ ಕೈಯಲ್ಲಿದ್ದ ಬ್ಯಾಟನ್ನು ಜೋರಾಗಿ ಬೀಸಿದ.ಬಾಲ್ ಬ್ಯಾಟಿಗೆ ಬಡೆದ ಶಬ್ಧ ಎಲ್ಲರಿಗೂ ಜೋರಾಗಿ ಕೇಳಿಸಿತು.ಗಾಳಿಯಲ್ಲಿ ತೇಲಿದ ಬಾಲ್ ತೇಲುತ್ತಾ ನೇರ ತಮಿಳ್ ಆಂಟಿ ಮನೆಯ ಒಳಗೆ ಬಿತ್ತು.
ನಮ್ಮ ತಂತ್ರದ ಮೊದಲ ಹೆಜ್ಜೆ ರವಿ ಪೂರೈಸಿದ್ದ.ಇನ್ನೇನಿದ್ರು ನಮ್ಮಿಬ್ಬರ ಕೆಲಸ ಶುರು.
ಎಲ್ಲರೂ ಮ್ಯಾಚ್ ಮುಗಿದ ಅಬ್ಬರದಲ್ಲಿ,ಪದ್ದಿ ಗೆದ್ದ ಖುಷಿಯಲ್ಲಿ ಇರಬೇಕಾದ್ರೆ ನಮ್ಮಣ್ಣ ಮುಂದಿನ ಹೆಜ್ಜೇನ ಇಟ್ಟ.ನನ್ನ ಕಡೆಗೆ ತಿರುಗಿ ನೋಡಿ “ಹೊರಡು” ಎನ್ನುವಂತೆ ತಲೆಯಾಡಿಸಿ ಒಮ್ಮೆ ಮುಗುಳ್ನಗೆ ಬೀರಿದ.ಪ್ರತಿ ದಿನ ಬೆಕ್ಕಿನಂತೆ ತಮಿಳ್ ಆಂಟಿ ಮನೆಯ ಒಳ ಹೊಕ್ಕುತ್ತಿದ್ದ ನಾನು ಪ್ಲ್ಯಾನ್ ಪ್ರಕಾರ ಇಂದು ಓಡಿ ಹೋಗಿ ಜೋರಾಗಿ ಸದ್ದು ಬರುವಂತೆ ಮನೆಯ ಗೇಟ್ ತೆರೆದೆ.ಚಪ್ಪಲಿ ಗೂಡಿನ ಬಳಿ ಬಾಲ್ ಕಂಡಿತು.ಆದ್ರು ನನಗೆ ಕಾಣಲಿಲ್ಲವೇನೋ ಎಂಬುವಂತೆ ಗಿಡಗಳ ಮಧ್ಯ ಕೈಯ್ಯಾಡಿಸುತ್ತಿದ್ದೆ.ಇದೇ ಸಮಯದಲ್ಲಿ ನಮ್ಮಣ್ಣ ಎದುರು ಮನೆಯ ಜೈನರ ಮನೆಯ ಕಾಂಪೌಂಡ್ ಏರಿ,ಮಹಡಿಗೆ ಜಿಗಿದಿದ್ದ.ಎಲ್ಲರಿಗೂ ಏನು ನಡೀತಿದೇ ಅನ್ನೋದರ ಅರಿವೂ ಇರಲಿಲ್ಲ. ರವಿ ಬೆಕ್ಕಿನ ಹೆಜ್ಜೆ ಇಡುತ್ತಾ ನಿಧಾನವಾಗಿ ಮಹಡಿಯ ಹಿಂಭಾಗಕ್ಕೆ ಹೋದ.ಜೈನರ ಮನೆಯ ಪಕ್ಕದ ಮನೆಯೇ ತಮಿಳ್ ಆಂಟಿ ಮನೆ.ನಮ್ಮಣ್ಣ ಮಹಡಿಯಿಂದ ಜಿಗಿದರೆ ನೇರ ತಮಿಳ್ ಆಂಟಿ ಮನೆಯ ಹಿತ್ತಲಿಗೆ ಬೀಳುತ್ತಾನೆ.
ಪ್ಲ್ಯಾನ್ ಪ್ರಕಾರವಾಗಿ ನಾನು “ಬಾಲ್ ಸಿಗ್ತಿಲ್ಲಾ ಕಣ್ರೋ” ಎಂದು ಮೇಲು ಧ್ವನಿಯಲ್ಲಿ ಕೂಗು ಹಾಕಿದೆ.ತಮಿಳ್ ಆಂಟಿ ತಕ್ಷಣ ನಿದ್ದೆ ಕಣ್ಣಳ್ಳಿ ಬಾಗಿಲು ತೆಗೆದು ಹೊರ ನಡೆದರು.ನಾನು ಹುಡುಕುವಂತೆ ನಟನೆ ಮಾಡ್ತಿದ್ದೆ.
ಆಷ್ಟ್ರಲ್ಲಿ ನಮ್ಮಣ್ಣ ಜೈನರ ಮನೆಯ ಮಹಡಿಯಿಂದ ಹಾರಿ ತಮಿಳ್ ಆಂಟಿ ಮನೆಯ ಹಿತ್ತಲಲ್ಲಿ ನಿಂತಿದ್ದ.ನಿಧಾನವಾಗಿ ಹೆಜ್ಜೆ ಹಾಕುತ್ತ ಅವರ ಮನೆಯ ಹಿಂಭಾಗಕಕ್ಕೆ ನಡೆದಿದ್ದ.
“ತಲೇಲಿ ಏನ್ ತುಂಬ್ಕೊಂಡಿದ್ದೀರೋ?ಏನ್ ತಿನ್ನುತ್ತೀರ ಹೊಟ್ಟೇಗೆ?” ಎಂದು ಕಿರುಚಿದ್ರು ಆಂಟಿ.
“ಆಂಟಿ..ಅದೂ… ಅದೂ.. ಬಾಲ್ ಬಿದ್ದಿತ್ತು..” ಎಂದು ಬೇಕು ಅಂತಾನೆ ಮಾತನ್ನು ಬೆಳೆಸ್ತಾ ಇದ್ದೆ.
ಮಂಡಿಯೂರಿ ಅಂಬೆಗಾಲು ಹಾಕಿಕೊಂಡು ನಮ್ಮಣ್ಣ ಮನೆಯ ಬಾಗಿಲ ಕಡೆಗೆ ಬರುತ್ತಿದ್ದದ್ದು ನನಗೆ ಕಂಡಿತು.ಮುಂದಿನ ಮೂರು ನಿಮಿಷಗಳು ನಾನು ಆಂಟಿಯನ್ನು ಮಾತಿನಲ್ಲಿ ತೊಡಗಿಸ ಬೇಕು.ಅವ್ರನ್ನ ಬಿಟ್ರೆ.. ಮನೆಯೊಳಗೆ ಹೋಗ್ತಾರೆ.ಜಗುಲಿಯಲ್ಲಿ ನಮ್ಮಣ್ಣ ಬ್ಯಾಟ್ ಕದೀತಿರೋದ್ನ..ಕದೀತಿರೋದಲ್ಲ ನಮ್ಮದಾಗಿಸಿಕೊಳ್ತಿರೋದ್ನ ನೋಡಿಬಿಡ್ತಾರೆ.ಮತ್ತೆ ರಾದ್ಧಾಂತ ಆಗಿ ಹೋಗತ್ತೆ.
“ಬಾಲ್ ಇಲ್ಲೆ ಎಲ್ಲೋ ಬಿದ್ದಿತ್ತು ಆಂಟಿ.ಹುಡುಕ್ತಾ ಇದ್ದೆ.ನೀವ್ ನಿದ್ದೆ ಮಾಡ್ತಿದ್ರ?ಎಬ್ಬಿಸಿದ್ದಕ್ಕೆ ತಪ್ಪಾಯ್ತು ಆಂಟಿ.”
ರವಿ ಮನೆಯೊಳಗೆ ಹೋಗಿದ್ದಾನೆ.
“ಆಂಟಿ ದಿನೇಶ್ನ ಯಾಕಾಂಟಿ ಆಟಕ್ಕೆ ಕಳ್ಸಲ್ಲ.ತುಂಬಾ ಚೆನ್ನಾಗಾಡ್ತಾನೆ ಅವ್ನು.ನಿಜ್ವಾಗ್ಲು. ಅವ್ನಿದ್ರೆ ಅವ್ನೆ ನಮ್ ಕ್ಯಾಪ್ಟನ್ನೂ”
ಮನೆಯೊಳಗೆ ಏನ್ ನಡೀತಿದ್ಯೋ ಗೊತ್ತಾಗ್ತಿಲ್ಲ.ಬ್ಯಾಟ್ ಸಿಕ್ಕಿದ್ಯೋ ಇಲ್ವೊ?
“ಮರ್ಯಾದೆ ಇಲ್ಲ ನಿನಗೂ ನಿಮ್ಮಣ್ಣಂಗೂ.ನೀವಂತೂ ಓದಲ್ಲ.ನನ್ನ ಮಗ ಆದ್ರು ಓದಿ ಉದ್ಧಾರ ಆಗ್ಲಿ.ನಿಮ್ ಥರ ಪೋಲಿ ಅಲಿಯಲ್ಲ ಅವ್ನು.” ಅಂದು ತಮಿಳು ಮಿಶ್ರಿತ ಕನ್ನಡದಲ್ಲಿ ಉಪದೇಶದಂತೆ ಬೈದ್ರು ಆಂಟಿ.
ಒಂದು ಕೈಯಲ್ಲಿ ಬ್ಯಾಟು ಹಿಡಿದು ನಿಧಾನವಾಗಿ ನಮ್ಮಣ್ಣ ಹೊರಗೆ ಬಂದ.ಈ ಬಾರಿ ಬಗ್ಗಿ ನಡಿಯುತ್ತಿದ್ದಾನೆ.ಎದೆ ಢವ-ಢವ ಎಂದು ಜೋರಾಗಿ ಬಡಿತಾಯಿದೆ.
“ಏನ್ ಆಂಟಿ ಹಾಗಂತೀರ.. ನಾವೇನ್ ಓದಲ್ವ? ಈ ಸರ್ತಿ ಟೆಸ್ಟಲ್ಲಿ ೧೦ಕ್ಕೆ ೯ ತೆಗೆದಿದ್ದೀನಿ ಗೊತ್ತ? ಸುಮ್ ಸುಮ್ನೆ ಹಾಗೆಲ್ಲ ಬೈಬೇಡಿ ನೀವು”
“ನಿನಗೂ ನಿಮ್ಮಣ್ಣನಿಗೂ ದೊಡ್ಡವ್ರಿಗೆ ಹೇಗೆ ಮರ್ಯಾದೆ ಕೊಡ್ಬೇಕು ಅನ್ನೋದೆ ಗೊತ್ತಿಲ್ಲ.ನಿಮ್ಮ ಮನೇಗ್ ಬಂದು ನಿಮ್ಮಮ್ಮಂಗೆ ಹೇಳ್ತಿನಿ ಇರು.”
ರವಿ ಕಾಣ್ತಿಲ್ಲ. ಬಹುಶಃ ಮನೆಯ ಹಿಂದಿನಿಂದ ನಡೆದು ಹೋಗ್ತಿದ್ದಾನೆ.ಇನ್ನು ಒಂದೂವರೆ ನಿಮಿಷ ನನ್ನ ನಾಟಕ,
“ಆಂಟಿ ದಯವಿಟ್ಟು ಬೇಡ ಆಂಟಿ,ಇನ್ಮೇಲೆ ನಿಮ್ಮನೆಗೆ ಬಾಲ್ ಹೊಡ್ಯಲ್ಲ. ನಮ್ಮಮ್ಮಂಗೆ ಮಾತ್ರ ಹೇಳ್ಬೇಡಿ ಆಂಟಿ” ಎನ್ನುತ್ತ ಚಿಕ್ಕ ಮಗುವಿನ ಹಾಗೆ ಪಿಳ ಪಿಳ ಕಣ್ಣಾಡಿಸಿದೆ.
ಇನ್ನೇನೆ ಆದ್ರು ಇದೇ ಕೊನೆ ಮಾತು.. ಬಾಲ್ ತೊಗೊಂಡು ಏನು ತಿಳಿಯದವನ ಹಾಗೆ ಹೊರಗೆ ನಡೆದು ಹೋಗೋದು ಅಂತ ನಿಶ್ಚಯ ಮಾಡ್ಕೊಂಡು.
“ಹಾಂ!! ಆಂಟಿ ಬಾಲ್ ಸಿಕ್ತು.. ಇನ್ಮೇಲೆ ನಿಜ್ವಾಗ್ಲು ಹೊಡಿಯಲ್ಲ ಆಂಟಿ.ದಿನೇಶ್ನ ಆಟಕ್ಕೆ ಕಳ್ಸಿ ಪ್ಲೀಜ಼್” ಎನ್ನುತ್ತಾ ತಲೆಯೊಲಗೆ ಲೆಕ್ಕಾಚಾರ ಹಾಕ್ಕೊಂಡು,ನೆನ್ನೆ ರಾತ್ರಿ ನಮ್ಮಣ್ಣ ಮಾಡಿದ ಪ್ಲ್ಯಾನ್ ಸಫ಼ಲವಾಯ್ತು ಅಂತ ನಂಬಿ,ಹೊರಗೆ ಹೋದಾಗ ನಮ್ಮ ಬ್ಯಾಟ್ ಹಿಡಿದು ರವಿ ನಿಂತಿರಬೇಕಪ್ಪ ಗಣೇಶ ಅಂತ ಬೇಡ್ಕೊಂಡು,ಅಲ್ಲೇ ಕಾಣುತ್ತಿದ್ದ ಬಾಲನ್ನು ಕೈಯಲ್ಲಿ ಹಿಡಿದು ಹೊರಗೆ ಚಿಕ್ಕ ಮಗುವಿನ ಹಾಗೆ ನಡೆದು ಹೋದೆ.
ಮೂರು ದಿನಗಳ ನಂತರ
“ಇವತ್ತೇ ಹೊರಗೆ ತರಬೇಡ ಕಣೋ ಬ್ಯಾಟ್ನ,ದಿನೇಶ ಆಡೋಕೆ ಬಂದಿದ್ದಾನೆ.” ಅಂತ ಮೆಲುಧ್ವನಿಯಲ್ಲಿ ನಾನು ರವಿಗೆ ಹೇಳಿದೆ.
“ಹೆದರಿಕೆ ಯಾಕೋ.. ನಮ್ಮ ಬ್ಯಾಟು,ನಾವ್ ಆಡೋಣ” ಎನ್ನುತ್ತಾ ತಮಿಳ್ ಆಂಟಿ ಮನೆಯಿಂದ ಜೈನರ ಮನೆಗೆ ಹಾರುವಾಗ ಬಿದ್ದು ತೆರಚಿದ ಕಾಲನ್ನು ನಿಧಾನವಾಗಿ ಇಡುತ್ತಾ ನಮ್ಮಣ್ಣ ಆಡಲು ನಿಂತ.ನಾನು ಅವನ ಹಿಂದೆ ನೆರಳಾದೆ.
-      ರೋಹಿತ್ ಪದಕಿ




6 comments:

  1. This reminds me all my gully cricket days all brothers fights wwf awesome.....loved it

    ReplyDelete
  2. ಎಲ್ಲರೂ ಹೇಳ್ತಾರೆ ಬದಲಾವಣೆ ಕಾಣಬೇಕು ಅಂತ,
    ಆ ಬದಲಾವಣೆ ನಾನು ನಿನ್ನಲ್ಲಿ ಕಂಡೆ.
    ಚೆನ್ನಾಗಿ ಈದೆ ಗೆಳಯ ಈ ನಿನ್ನ ಮೊದಲನೆ ಪ್ರಯತ್ನ.
    ತುಂಬಾ ಖುಷಿ ಆಯ್ತು. :)

    ReplyDelete